ಕೇಶಿ ಧ್ವಜ

ಕುಶಧ್ವಜನ ಮಗನಾದ ಧರ್ಮಧ್ವಜನ ಹಿರಿಯಮಗ. ವಿದೇಹ ದೇಶದ ರಾಜ. ದುರಾಸೆಯಿಂದ ಚಿಕ್ಕಪ್ಪನಾದ ಖಾಂಡಿಕ್ಯನ ಮೇಲೆ ಬಿದ್ದು ಆತನ ರಾಜ್ಯಾಪಹರಣಮಾಡಿದ. ಸೋತ ಖಾಂಡಿಕ್ಯ ಅರಣ್ಯವಾಸಿಯಾಗಿ ತಪೋನಿಷ್ಠೆಯಿಂದ ಜೀವನ ನಡೆಸುತ್ತಿದ್ದ.

	ಒಮ್ಮೆ ಕೇಶಿಧ್ವಜ ಯಜ್ಞದೀಕ್ಷಿತನಾಗಿ ಯಾಗದ ಕುದುರೆಯನ್ನು ದೇಶಸಂಚಾರಕ್ಕಾಗಿ ಕಳುಹಿಸಿದಾಗ ಅರಣ್ಯ ಮಧ್ಯದಲ್ಲಿ ಅದು ಹುಲಿಯ ಬಾಯಿಗೆ ತುತ್ತಾಯಿತು. ಕಿಂಕರ್ತವ್ಯತಾಮೂಢನಾದ ಕೇಶಿಧ್ವಜ ತಪೋನಿಷ್ಠನಾದ ತನ್ನ ಚಿಕ್ಕಪ್ಪನ ಬಳಿಗೆ ಸಲಹೆಗಾಗಿ ಬಂದ. 
ಪೂರ್ವದ್ವೇಷಾಸೂಯೆಗಳೆಲ್ಲವನ್ನೂ ಮರೆತ ಖಾಂಡಿಕ್ಯ ಕೇಶಿಧ್ವಜನಿಗೆ ಸೂಕ್ತ ಮಾರ್ಗದರ್ಶನ ಮಾಡಿದ. ಈ ಉಪಕಾರಕ್ಕಾಗಿ ಖಾಂಡಿಕ್ಯನಿಗೆ ಗುರುದಕ್ಷಿಣೆ ರೂಪದಲ್ಲಿ ಏನು ಬೇಕಾದರೂ ಕೊಡಲು ಸಿದ್ಧನಿರುವುದಾಗಿ ಕೇಶಿಧ್ವಜ ತಿಳಿಸಲು ಖಾಂಡಿಕ್ಯ ರಾಜ್ಯಕೋಶಾದಿಗಳಾವುದನ್ನೂ ಆಶಿಸದೆ ಆತನಿಂದ ಕೆಲವು ಯೋಗ ರಹಸ್ಯಗಳನ್ನು ಕೇಳಿ ತಿಳಿದುಕೊಂಡ. 		
(ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ